top of page

ಸಮಾಜದ ಋಣ


ನಮ್ಮ ಮಕ್ಕಳು ವಿದ್ಯಾವಂತರಾಗಿ ಸುಖ ಸಂತೋಷಗಳಿಂದ ಕೂಡಿದ ಜೀವನವನ್ನು ನಡೆಸಬೇಕೆನ್ನುವುದು ಪ್ರತಿಯೊಬ್ಬ ಮಾತಾಪಿತೃವಿನ ಆಶಯ. ಅದಕ್ಕಾಗಿ ಅವರಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಬೇಕೆನ್ನುವುದು ಎಲ್ಲ ಪೋಷಕರಲ್ಲಿರುವ ಸಹಜವಾದ ಯೋಚನೆ. ಕಾರಣಾಂತರಗಳಿಂದ ಈಗಿನ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎನ್ನುವುದನ್ನರಿತು ಪರ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಿ ನಡೆಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿದ್ದೇವೆ. ಈ ರೀತಿಯಾದ ಸವಾಲನ್ನು ಸ್ವೀಕರಿಸಿ ಕಾರ್ಯೋನ್ಮುಖರಾಗುವ ಕೆಲವೇ ಪೋಷಕರಲ್ಲಿ ನಾವುಗಳು ಸೇರಿದ್ದೇವೆ ಎನ್ನುವುದು ಸಂತೋಷದ ವಿಷಯ. ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕೊಡಬೇಕು ಎನ್ನುವ ಚಿಂತನೆ ನಡೆಸುವುದು, ಅದಕ್ಕನಗುಣವಾದ ಯೋಜನೆಗಳನ್ನು ತಯಾರು ಮಾಡುವುದು ಹಾಗೂ ಆ ಯೋಜನಗಳನ್ನು ಕಾರ್ಯರೂಪಕ್ಕೆ ತರಲು ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಸಂವಿದಾ ಯಶಸ್ವಿಯಾಗಿ ನಡೆಯಲು ಬೇಕಾದ ಕೆಲಸಗಳು ಹಾಗೂ ಜವಾಬ್ದಾರಿಗಳನ್ನು ನಾವು ಹಂಚಿಕೊಂದು ಒಂದು ಪರಿವಾರದವರಂತೆ ಸಮನಸ್ಕರಾಗಿ ಕಾರ್ಯತತ್ಪರರಾಗಿದ್ದೇವೆ. ನಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಬೇಕಾದ ವಾತಾವರಣ ಹಾಗೂ ಶಿಕ್ಷಣ ಸಂವಿದಾದಲ್ಲಿ ತಕ್ಕಮಟ್ಟಿಗೆ ಸಿಗುತ್ತಿದೆಯನ್ನುವ ನಂಬಿಕೆ ನಮ್ಮಲ್ಲಿದೆ. ಈ ರೀತಿಯಾದ ಯೋಚನೆಗಳು ವ್ಯಷ್ಠಿಯಲ್ಲಿ ತಪ್ಪಲ್ಲದಿದ್ದರೂ ಸಮಷ್ಟಿ ದೃಷ್ಟಿಯಿಂದ ಪರಿಶೀಲಿಸಿದಾಗ ನಮ್ಮ ಯೋಚನೆಗಳು ವಿಸ್ತಾರವಾಗುವ ಅನಿವಾರ್ಯತೆ ತೋರುತ್ತದೆ. ಒಂದು ಕುಟುಂಬವು ಸುಭದ್ರವಾಗಿ, ಸುಖ ಸಂತೋಷ ನೆಮ್ಮದಿಯಾಗಿ ಜೀವನ ನಡೆಸಲು ಅನುವು ಮಾಡಿ ಕೊಡುವ ಸಾಮರ್ಥ್ಯ ಸಮಾಜಕ್ಕಿರಬೇಕು. ಅಂದರೆ ಸಮಾಜವು ಸುಭಿಕ್ಷವಾಗಿ ಸಧೃಡವಾಗಿ ಹಾಗೂ ಧರ್ಮವಾಗಿಲ್ಲದಿದ್ದಲ್ಲಿ ಸಜ್ಜನರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಸಮಾಜದ ಈ ಅವಶ್ಯಕ ಗುಣಗಳನ್ನು ಉಳಿಸಿ ಬೆಳೆಸುವುದು ಸಮರ್ಥರಾದ ಸಜ್ಜನರಿಂದಲೇ ಸಾಧ್ಯ. ಆ ರೀತಿಯ ಸಮರ್ಥರಾದ ಸದ್ಗುಣಗಳನ್ನು ಹೊಂದಿರುವ ಕಾರ್ಯಶೀಲ ವ್ಯಕ್ತಿಗಳನ್ನ ಪ್ರತಿಯೊಂದು ಕುಟುಂಬವೂ ಸಮಾಜಕ್ಕೆ ನೀಡಿದರೆ ಮಾತ್ರ ಸಮಾಜವು ಔನ್ನತ್ಯಕ್ಕೆ ಸಾಗಲು ಸಾಧ್ಯ. ಇದು ಪ್ರತಿ ಕುಟುಂಬದ ಕರ್ತವ್ಯವೆನ್ನುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಪ್ರಚಲಿತ ಸಮಾಜದಲ್ಲಿ ಈ ರೀತಿಯ ಸಮಷ್ಟಿ ದೃಷ್ಟಿ ಕಂಡುಬರುತ್ತಿಲ್ಲ. ಹೀಗಾಗಿ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸಂಕುಚಿತವಾದ ಆಶಾಗೋಪುರಗಳನ್ನ ಕಟ್ಟುತ್ತಿದ್ದೇವೆ. ನಮ್ಮ ಮಕ್ಕಳಿಗೆ ಯಾವುದೇ ಕುಂದು ಕೊರತೆ ತೊಂದರೆ ಇಲ್ಲದೆ ಎಲ್ಲ ರೀತಿಯ ಅವಕಾಶಗಳೂ ಸುಖಗಳೂ ಸಿಗಬೇಕೆನ್ನುವ ಆಶೆ ನಮ್ಮದಾಗುತ್ತಿದೆ. ಅದಕ್ಕನುಗುಣವಾಗಿ ಶಿಕ್ಷಣ ವ್ಯವಸ್ಥೆಯೂ ಸುಲಭ ರೀತಿಯಲ್ಲಿ ಎಲ್ಲರಿಗೂ ಅಂಕಗಳನ್ನು ಕೊಟ್ಟು ನಮ್ಮ ಮಕ್ಕಳು ಬಹಳ ಬುದ್ಧಿವಂತರೇನೋ ಅನ್ನುವ ಭ್ರಮೆ ಬರುವಂತೆ ಮಾಡುತ್ತಿದೆ. ಮಕ್ಕಳಲ್ಲಿನ ಸಾಮರ್ಥ್ಯಗಳನ್ನು ಗುರುತಿಸಿ ಬೆಳಸದೆಯೇ ಈ ಭ್ರಮೆಯನ್ನು ತುಂಬುತ್ತಿರುವುದು ಮತ್ತಷ್ಟೂ ಖೇದದ ಸಂಗತಿ. ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹಾಗೂ ಶಿಕ್ಷಣದ ಉದ್ದೇಶದ ಬಗ್ಗೆ ನಮ್ಮಲಿರುವ ಸಂಕುಚಿತ ಮನೋಭಾವ, ನಮ್ಮ ಮಕ್ಕಳನ್ನ ವಿದ್ಯಾರ್ಥಿಗಳಲ್ಲದೆ ಕೇವಲ ಉದ್ಯೋಗಾರ್ಥಿಗಳನ್ನಾಗಿ ಪರಿಗಣಿಸುವಂತೆ ಮಾಡುತ್ತಿದೆ. ನಮ್ಮ ಮಕ್ಕಳು ಸಮರ್ಥರಾಗಿ ಸದ್ವಿಚಾರ ಸದಾಚಾರಗಳನ್ನ ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಸುಸಂಸ್ಕೃತ ಜೀವನವನ್ನ ನಡೆಸುವಂತಾಗುವ ಆಸೆ ನಮ್ಮದಾಗಬೇಕು. ಅದು ಕೇವಲ ಆಸೆಯಾಗದೆ, ಆ ರೀತಿಯ ಶಿಕ್ಷಣ ನಮ್ಮ ಮಕ್ಕಳಿಗೆ ಒದಗಿಸುವುದು ನಮ್ಮ ಕರ್ತವ್ಯ ಹಾಗೂ ನಾವು ಸಮಾಜದ ಋಣ ತೀರಿಸುವ ಮಾರ್ಗವಾಗಿ ಪರಿವರ್ತನೆಗೊಳ್ಳಬೇಕು. ಈ ರೀತಿಯ ದೃಷ್ಟಿ ಸಂವಿದಾದ ಎಲ್ಲಾ ಪೋಷಕರಲ್ಲಿದ್ದಲ್ಲಿ ಸಂವಿದಾದ ಪ್ರತಿಯೊಂದು ಮಗುವೂ ನಮ್ಮ ಮಗುವೇ ಎನ್ನುವ ವಿಶಾಲಮನೋಭಾವ ಬೆಳಸಿಕೊಳ್ಳುವದು ಸುಲಭ. ಹಾಗಾದಲ್ಲಿ ನಮ್ಮ ಧ್ಯೇಯೋತ್ಸಾಹಗಳು ಹೆಚ್ಚಿ ನಮ್ಮ ಕಾರ್ಯವೈಖರಿಯೂ ಉತ್ತಮಗೊಂಡು ಸಂವಿದಾದ ಉದ್ದೇಶ ಫಲಕಾರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಸಂವಿದಾ ಕೇವಲ ನಮ್ಮ ಮಕ್ಕಳ ವಿದ್ಯಾಭ್ಯಾಸದ ಕೇಂದ್ರವಲ್ಲದೆ ಸಮಾಜದ ಋಣ ತೀರಿಸಲು ಪೋಷಕರಿಗೆ ಒದಗಿಬಂದ ಅವಕಾಶವಾಗಬೇಕೆನ್ನುವುದು ಗುರುಹಿರಿಯರ ಅನುಗ್ರಹಮಾರ್ಗ.

0 views0 comments

Recent Posts

See All

Comments


bottom of page